ಅದಿರಾಟ
	
ಚಲನಾತ್ಮಕ ವಸ್ತುವಿನ ಜಡತ್ವದಲ್ಲಿ (ಇನರ್ಷಿಯ) ಸಮತೋಲವಿಲ್ಲದಿದ್ದರೆ ಅದು ಮಾಡುವ ಕಂಪನಕ್ಕೆ ಅಥವಾ ಸ್ಪಂದನಕ್ಕೆ ಈ ಹೆಸರು ಇದೆ. ಕಂಪಿಸುವ ವಸ್ತು ತನ್ನ ಸ್ಥಿರಾಸ್ಥಾಯಿಯಿಂದ ಎಡಕ್ಕೂ ಬಲಕ್ಕೂ ಅತಿ ವೇಗದಿಂದ ಅಲುಗಾಡುತ್ತದೆ. ಒಂದು ಗೊತ್ತಾದ ಕಾಲಾವಧಿಯಲ್ಲಿ ಆ ವಸ್ತು ಎಷ್ಟು ಸಲ ಅದಿರಾಡುತ್ತದೆಯೋ ಆ ಸಂಖ್ಯೆಗೆ ಸ್ಪಂದನ ಆವೃತ್ತಿಸಂಖ್ಯೆ (ಫ್ರೀಕ್ವೆನ್ಸಿ) ಎಂದು ಹೆಸರು. ಜಗತ್ತಿನ ಮೇಲಿನ ಎಲ್ಲ ವಸ್ತುಗಳಲ್ಲಿಯೂ ಅದಿರಾಟದ ಸ್ವಾಭಾವಿಕ ಸ್ಪಂದನ (ನ್ಯಾಚುರಲ್ ಫ್ರೀಕ್ವೆನ್ಸಿ ಆಫ್ ವೈಬ್ರೇಷನ್) ಇರುತ್ತದೆ. ಕಂಪಿಸುವ ವಸ್ತುವೊಂದನ್ನು ಸ್ಥಿರವಸ್ತುವೊಂದಕ್ಕೆ ತಗಲುವಂತೆ ಇಟ್ಟರೆ ಸ್ಥಿರವಸ್ತುವಿನಲ್ಲಿಯೂ ಕಂಪನವುಂಟಾಗುತ್ತದೆ. ಕಂಪಿಸುವ ವಸ್ತುವಿನ ಸ್ಪಂದನವೇನಾದರೂ ಆ ಸ್ಥಿರವಸ್ತುವಿನ ಸ್ವಾಭಾವಿಕ ಸ್ಪಂದನದಷ್ಟೇ ಇದ್ದರೆ, ಸ್ಥಿರವಸ್ತುವಿನ ಕಂಪನ ಇಮ್ಮಡಿಯಾಗುತ್ತದೆ. ಈ ಸ್ಥಿತಿಗೆ ಸಮಕಾಲಿಕ ಕಂಪನ (ಸಿನ್‍ಕ್ರೋನಿಸಮ್) ಎಂದು ಹೆಸರು. ಹೀಗಲ್ಲದೆ ಆ ಎರಡು ವಸ್ತುಗಳ ಸ್ಪಂದನ ಬೇರೆ ಬೇರೆಯಾಗಿದ್ದರೆ ಕಂಪನ ಇಳಿಮುಖವಾಗುತ್ತದೆ. ಅದಿರಾಟವನ್ನು ಅಳೆಯುವ ಅತಿ ಸೂಕ್ಷ್ಮಯಂತ್ರಕ್ಕೆ ಕಂಪನಮಾಪಕ (ಸಿಸ್ಮೊ ಮೀಟರ್) ಎಂದು ಹೆಸರು. ಕಂಪನದಿಂದ ಉಂಟಾಗುವ ತರಂಗಗಳ ವೈಶಾಲ್ಯವನ್ನೂ (ಆ್ಯಂಪ್ಲಿಟ್ಯೂಡ್) ಮತ್ತು ಸ್ಪಂದನವನ್ನೂ ಈ ಯಂತ್ರ ಅಳೆಯುತ್ತದೆ. ಚಲನವಸ್ತುಗಳನ್ನೂ ಸ್ಥಿರವಸ್ತುಗಳನ್ನೂ ಬೇರ್ಪಡಿಸುವುದರ ಮೂಲಕ ಸ್ಥಿರವಸ್ತುಗಳಲ್ಲಿ ಕಂಪನ ಉಂಟಾಗುವಂತೆ ಮಾಡಬಹುದು. ಯಂತ್ರಗಳಿಗೂ ಮತ್ತು ಅವುಗಳ ಪಾಯಗಳಿಗೂ (ಫೌಂಡೇಷನ್) ಮಧ್ಯೆ, ಕಂಪನ ತಡೆಯುವ ಪದಾರ್ಥಗಳನ್ನು (ವೈಬ್ರೇಷನ್ ಡ್ಯಾಂಪರ್ಸ್) ಉಪಯೋಗಿಸಿ ಪಾಯಗಳನ್ನು ಸಂರಕ್ಷಿಸಬಹುದು. ಉಣ್ಣೆಯಂತಿರುವ ಫೆಲ್ಟ್ ಎಂಬ ಬಟ್ಟೆ, ಬಿರಡೆ ತೊಗಟೆ (ಕಾರ್ಕ್)- ಮುಂತಾದವುಗಳೇ ಈ ಪದಾರ್ಥಗಳು.

(ಕೆ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ